ಕಾಂಜೀವರಂ ಹಯವದನರಾವ್ ಅವರು, ನಿಜವಾಗಿಯೂ ಬಹುಮುಖೀ ಪ್ರತಿಭೆಯನ್ನು
ಹೊಂದಿದ್ದ ಮಹನೀಯರು. ಆಧುನಿಕ ಮೈಸೂರು ರಾಜ್ಯದ ನಿರ್ಮಾಣಕ್ಕೆ, ಅಂತೆಯೇ ಪ್ರಾಚೀನ ಕರ್ನಾಟಕದ ಇತಿಹಾಸದ
ಮರುರಚನೆಗೆ ಅವರು ನೀಡಿರುವ ಮುಂಚೂಣಿಯ ಕಾಣಿಕೆಗಳಿಗೆ ಸಮಾನ ಮಹತ್ವವಿದೆ. ಸಹಜವಾಗಿಯೇ, ಈ ಟಿಪ್ಪಣಿಯಲ್ಲಿ ಅವರ ಸಾಧನೆಯ ಎರಡನೆಯ ಆಯಾಮಕ್ಕೆ ಹೆಚ್ಚಿನ ಮಹತ್ವ
ನೀಡಲಾಗಿದೆ. ಮದ್ರಾಸಿನ ಸರ್ಕಾರೀ ಮ್ಯೂಸಿಯಂನಲ್ಲಿ ಕ್ಯುರೇಟರ್ ಆಗಿ ಅವರು ಮಾಡಿದ ಕೆಲಸವು, ಅನಂತರ, ಮೈಸೂರು
ರಾಜ್ಯದಲ್ಲಿ ತೊಡಗಿಕೊಂಡ ಚಟುವಟಿಕೆಗಳಿಗೆ ಪೂರ್ವಪೀಠಿಕೆಯಂತಿದೆ. ಅವರು ಇಂಗ್ಲಿಷ್, ಲ್ಯಾಟಿನ್, ಫ್ರೆಂಚ್,
ಜರ್ಮನ್, ಕನ್ನಡ, ತಮಿಳು, ತೆಲುಗು, ಮರಾಠಿ ಮತ್ತು ಸಂಸ್ಕೃತಗಳಲ್ಲಿ ವ್ಯವಹರಿಸುವ ಸಾಮರ್ಥ್ಯವುಳ್ಳ
ಬಹುಭಾಷಾವಿದರಾಗಿದ್ದರು. ಲಂಡನ್ನಿನ ‘ರಾಯಲ್ ಆಂಥ್ರೊಪೊಲಾಜಿಕಲ್
ಇನ್ಸ್ಟಿಟ್ಯೂಟ್‘ ಮತ್ತು
‘ಇಂಡಿಯನ್’
ಹಿಸ್ಟಾರಿಕಲ್ ರಿಕಾರ್ಡ್ಸ್ ಕಮಿಷನ್’ಗಳ ಸದಸ್ಯತ್ವ ಹಾಗೂ
‘ರಾಯಲ್ ಸೊಸೈಟಿ ಆಫ್ ಇಕನಾಮಿಕ್ಸ್’ನ ಫೆಲೋ ಪದವಿಗಳನ್ನು ಅವರು ಪಡೆದಿದ್ದರು.
ಹೀಗೆ, ಹಯವದನರಾಯರು ತಮ್ಮ ಜೀವನದ ಮಹಾನ್ ಸಾಧನೆಯನ್ನು ನಿರ್ವಹಿಸಲು
ಅಗತ್ಯವಾದ ಎಲ್ಲ ಅರ್ಹತೆಗಳನ್ನೂ ಪಡೆದಿದ್ದರು. ಅವರು, 1924 ರಲ್ಲಿ, ಬಿ.ಎಲ್. ರೈಸ್ ಅವರು ತಯಾರಿಸಿದ್ದ
ಗೆಝೆಟಿಯರ್ ಅನ್ನು ಪರಿಷ್ಕರಿಸಲೆಂದು ನೇಮಕವಾದ ಸಮಿತಿಯ ಸಂಪಾದಕರ ಹುದ್ದೆಯನ್ನು ಪಡೆದರು. ಈ ಜವಾಬ್ದಾರಿಯನ್ನು
ಯಶಸ್ವಿಯಾಗಿ ನಿರ್ವಹಿಸಿ, ಅವರು ಸಿದ್ಧಪಡಿಸಿದ ಪರಿಷ್ಕೃತ ಸಂಪುಟಗಳು, ಮೈಸೂರು ರಾಜ್ಯದ ಚರಿತ್ರೆಯಲ್ಲಿ
ಆಸಕ್ತರಾದ ಯಾರೇ ಆಗಲಿ ನೋಡಲೇ ಬೇಕಾದ ಮಹತ್ವದ ಕೃತಿಗಳಾಗಿವೆ. ಅದರ ಒಟ್ಟು ಏಳು ಸಂಪುಟಗಳನ್ನು ಕಾಲಕ್ರಮದಲ್ಲಿ
ಪ್ರಕಟಿಸಲಾಯಿತು. (ಮೈಸೂರ್ ಗೆಝೆಟಿಯರ್, ಸಿ.ಹಯವದನರಾವ್, 1927, ಸರ್ಕಾರೀ ಮುದ್ರಣಾಲಯ) ಕರ್ನಾಟಕದ
ಇತಿಹಾಸ, ನಾಣ್ಯಶಾಸ್ತ್ರ, ಶಾಸನಶಾಸ್ತ್ರ, ವಾಸ್ತುಶಿಲ್ಪ ಮತ್ತು ಮಾನವಶಾಸ್ತ್ರಗಳನ್ನು ವ್ಯವಸ್ಥಿತವಾಗಿ
ಅಧ್ಯಯನ ಮಾಡಬಯಸುವವರಿಗೆ ಇವು ಅಮೂಲ್ಯ ಆಕರಗಳು. ಅವರು, ಮೈಸೂರು ಒಡೆಯರ ರಾಜವಂಶದ ಚರಿತ್ರೆಯನ್ನು
ಮೂರು ಸಂಪುಟಗಳಲ್ಲಿ, ‘ಹಿಸ್ಟರಿ ಆಫ್ ಮೈಸೂರ್’(1399-1799) ಎಂಬ ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಶ್ರೀಪತಿ ಪಂಡಿತಾಚಾರ್ಯನ
‘ಶ್ರೀಕರಭಾಷ್ಯ’ವೆಂಬ
ಪುಸ್ತಕಕ್ಕೆ ವ್ಯಾಖ್ಯಾನವನ್ನು ಬರೆದಿದ್ದಾರೆ. ‘ಇಂಡಿಯನ್
ಕ್ಯಾಸ್ಟ್ ಸಿಸ್ಟಂ-ಎ ಸ್ಟಡಿ’ ಎನ್ನುವುದು ಅವರ ಇನ್ನೊಂದು
ಮಹತ್ವದ ಪುಸ್ತಕ. 1931 ರಲ್ಲಿ ಬೆಂಗಳೂರು ಪ್ರೆಸ್ಸಿನಿಂದ ಮೊದಲಬಾರಿ ಪ್ರಕಟವಾದ ಈ ಪುಸ್ತಕವು 1988
ರಲ್ಲಿ ಮರುಮುದ್ರಣಗೊಂಡಿದೆ. ಇದಲ್ಲದೆ ಹಯವದನರಾಯರು ಚರಿತ್ರೆಗೆ ಸಂಬಂಧಿಸಿದ ಅನೇಕ ಲೇಖನಗಳನ್ನು ಪ್ರಕಟಿಸಿದ್ದಾರೆ.
ಹಯವದನ ರಾವ್, ಅವರು ಆಕರ ಸಾಮಗ್ರಿಗಳ ಸಂಕಲನಕ್ಕೆ ಪ್ರಾಥಮಿಕ
ಮಹತ್ವವನ್ನು ಕೊಟ್ಟರು. ಅವರ ದೃಷ್ಟಿಯಲ್ಲಿ ಇತಿಹಾಸವೆಂದರೆ, ಕೇವಲ ರಾಜಕೀಯ ಘಟನೆಗಳ ನಿರೂಪಣೆಯಾಗಿರಲಿಲ್ಲ.
ಬದಲಾಗಿ ಅದು ಸಾಮಾಜಿಕ, ಆರ್ಥಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಗತಿಗಳ ಸಂಯೋಜನೆಯೆಂದು ಅವರು ತಿಳಿದಿದ್ದರು.
ಅವರ ಸ್ವಂತ ಬರವಣಿಗೆಯಲ್ಲಿ, ಈ ಅಂಶಗಳು ಗಣನೀಯ ಪ್ರಮಾಣದಲ್ಲಿ ಕೂಡಿಕೊಂಡಿವೆ.
|